ಪಾವಾಗಡ
ಗುಜರಾತಿನ ಒಂದು ಪುಣ್ಯಕ್ಷೇತ್ರ ಮತ್ತು ಪ್ರಸಿದ್ಧ ಗಿರಿದುರ್ಗ.  ಇದು ಬಡೋದಾದಿಂದ ಸುಮಾರು 40 ಕಿ.ಮೀ. ಅಂತರದಲ್ಲಿ ಎತ್ತರವಾದ ಗಿರಿಶಿಖರವೊಂದರ (ಸು. 2,800 ಅಡಿ) ಮೇಲಿದೆ.  ಹಿಂದೆ ಹನುಮಂತ ದ್ರೋಣ ಪರ್ವತವನ್ನು ಎತ್ತಿಕೊಂಡು ಹೋಗುತ್ತಿರುವಾಗ ಅದರ ಒಂದು ತುಕಡಿ ಕೆಳಗೆ ಬಿದ್ದು ಈ ಬೆಟ್ಟವಾಯಿತೆಂದು ದಂತಕಥೆ.  ಇಲ್ಲಿ ವಿಶ್ವಾಮಿತ್ರ ಋಷಿ ಆಶ್ರಮ ಕಟ್ಟಿಕೊಂಡು, ಮಹಾಕಾಳಿ ಮತ್ತು ಭದ್ರಕಾಳಿ ದೇವಸ್ಥಾನಗಳನ್ನು ಕಟ್ಟಿಸಿ ಮೂರ್ತಿಗಳನ್ನು ಪ್ರತಿಷ್ಠಿಸಿದನೆಂದು ಸ್ಥಳಪುರಾಣ ಹೇಳುತ್ತದೆ.  ಈ ದೇವಾಲಯಗಳಲ್ಲಿ ಭದ್ರಕಾಳಿ ಮಂದಿರ ದೊಡ್ಡದು.  ಬೆಟ್ಟದ ಮೇಲಿರುವ ದುಧಿಯೂ ಪುಣ್ಯತೀರ್ಥ.  ಪಶುಬಲಿ ಕೊಡುವ ರೂಢಿ ಇಲ್ಲ.

ಈ ದುರ್ಗಕ್ಕೆ ಅಟಕಾ, ಬುಢಿಯಾಕ ಮತ್ತು ಲಾಲಿಕಾ ಎಂಬ ಮೂರು ದೊಡ್ಡ ದೊಡ್ಡ ಬಾಗಿಲುಗಳಿವೆ.  ಕೋಟೆಯಲ್ಲಿ ಅನೇಕ ಸುರಂಗಮಾರ್ಗಗಳು ಭುಯಾರಗಳು ಇವೆ.  ಇಲ್ಲಿನ ಖಾಪರಾ ಮಹಲ್ ಎಂಬ ಸಪ್ತದ್ವಾರಗಳುಳ್ಳ ಅರಮನೆಯನ್ನು ಖಾಪರಾ ಎಂಬ ದೊಡ್ಡ ದರೋಡೆಕೋರ ಕಟ್ಟಿಸಿದನೆಂದು ಹೇಳಲಾಗಿದೆ.  ದುರ್ಗದ ಕೆಳಗೆ ಹತ್ತಿರದಲ್ಲಿಯೇ ಹಿಂದೆ ಮಹಾನಗರವೆನಿಸಿದ್ದ ಚಂಪಾನೇರ ಊರು ಇದೆ.  ಈ ಊರು ಮತ್ತು ದುರ್ಗ ಪಾತಾ ಈ ರಾವಲ (15 ನೆಯ ಶತಮಾನ) ಎಂಬ ದೊರೆಯ ಆಡಳಿತಕ್ಕೊಳಪಟ್ಟಿತ್ತೆಂದೂ ಚಂದಬರ್ದಾ ಈ ಕವಿಯ ಪೃಥ್ವೀ ರಾಜರಾಸೋ ಕಾವ್ಯದಲ್ಲಿ ಇವು ತೋಮರವಂಶೀಯ ರಾಜ ರಾಮಗೋಡ ತೋಮರನ ಅಧಿಪತ್ಯಕ್ಕೊಳಪಟ್ಟಿದ್ದವೆಂದು ಹೇಳಲಾಗಿದೆ.
ಅಲ್ಲದೆ ಇದು ಜೈನರಾದ ದಿಗಂಬರ ಹಾಗೂ ಶ್ವೇತಾಂಬರ ಎರಡು ಪಂಥಗಳಿಗೂ ಪವಿತ್ರಕ್ಷೇತ್ರ.  ಇಲ್ಲಿ ಪಾಶ್ರ್ವನಾಥ ತೀರ್ಥಂಕರನ ಒಂದು ಮಂದಿರವೂ ರಾಮಚಂದ್ರನ ಮಕ್ಕಳಾದ ಲವಕುಶರ ಪಾದಚಿಹ್ನೆಗಳು ಇವೆ.  ಲವಕುಶರು ಸೇರಿದಂತೆ ಲಾಟನರೇಂದ್ರ ಮುಂತಾಗಿ ಎಂಟುಕೋಟಿ ಮುನಿಗಳು ಇಲ್ಲಿ ಮೋಕ್ಷಕ್ಕೆ ಸಂದರೆಂದು ಜೈನಪಾರಂಪರ್ಯದ ಕಥೆ.  ಮಂತ್ರಿ ತೇಜಪಾಲ (ಕ್ರಿ.ಶ. 1218-46) ಇಲ್ಲಿ ಸರ್ವತೋ ಭದ್ರ ಎಂಬ ಜೈನ ಮಂದಿರವನ್ನು ಕಟ್ಟಿಸಿದುದ್ದಾಗಿ ಆತನ ಚರಿತ್ರೆಯಾದ ವಿಜಯ ಗ್ರಂಥದಿಂದ ತಿಳಿದುಬರುತ್ತದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ